ಕೃಷ್ಣಪ್ಪನಾಯಕ

ಈ ಹೆಸರಿನ ನಾಲ್ವರು ವ್ಯಕ್ತಿಗಳು ದಕ್ಞಿಣ ಭಾರತದ ವಿಜಯನಗರ ಸಾಮ್ರಾಜ್ಯದ ಕೊನೆಗಾಲದಲ್ಲಿ ಕಂಡುಬರುತ್ತಾರೆ. ಇವರಲ್ಲಿ ಇಬ್ಬರು ಮಧುರೆಯ ನಾಯಕ ಮನೆತನಕ್ಕೂ ಒಬ್ಬ ಜಿಂಜಿಯ ಪಾಳೆಯಪಟ್ಟಿಗೂ ಒಬ್ಬ ಹಾಸನ ಜಿಲ್ಲೆಯ ಮಂಜರಾಬಾದಿಗೂ ಸೇರಿದವರು.

ಕೃಷ್ಣಪ್ಪನಾಯಕ (ಮಧುರೆ) 1: ಮಧುರೆಯ ನಾಯಕ ಮನೆತನದ ವಿಶ್ವನಾಥನಾಯಕನ ಮಗ ಮತ್ತು ಆ ಮನೆತನದ ಎರಡನೆಯ ನಾಯಕ. 1529ರಲ್ಲಿ ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಸ್ಥಾಪಿತವಾದ ಈ ಪಾಳೆಯಪಟ್ಟಿಗೆ ಅಧಿಕಾರಿಯಾಗಿ 1564ರಿಂದ 1572ರವರೆಗೆ ಆಳಿದ. ಈತ ಪಟ್ಟಕ್ಕೆ ಬಂದ ಮರುವರ್ಷವೇ (1565) ಇತಿಹಾಸ ಪ್ರಸಿದ್ಧ ತಾಳಿಕೋಟೆ (ರಕ್ಕಸತಂಗಡಿ) ಕದನ ನಡೆಯಿತು. ಇವನು ವಿಜಯನಗರದ ನೆರವಿಗೆ ಕಳುಹಿಸಿದ ಸೈನ್ಯ ಯುದ್ಧಾನಂತರ ಆ ಸ್ಥಳವನ್ನು ತಲುಪಿದುದರಿಂದ ಪ್ರಯೋಜನವಾಗಲಿಲ್ಲ. ಅಲ್ಲದೆ 1565ರಲ್ಲಿ ತುಂಬಿಚ್ಚಿನಾಯಕನೆಂಬವ ಮಧುರೆಯ ನಾಯಕತ್ವವನ್ನು ಕಬಳಿಸಲು ಬಂದಿದ್ದಾಗ ಕೃಷ್ಣಪ್ಪನಾಯಕ ಅವನನ್ನು ಹಿಡಿಸಿ ಕೊಲ್ಲಿಸಿದರೂ, ಆತನ ಮಕ್ಕಳಿಗೆ ಕ್ಷಮಾದಾನ ನೀಡಿದ. ಕೃಷ್ಣಪ್ಪನಾಯಕ ಸಿಂಹಳ ದ್ವೀಪವನ್ನು ಮುತ್ತಿ ಅಲ್ಲಿಯ ರಾಜನನ್ನು ಸೋಲಿಸಿ, ವಿಜಯನಗರಕ್ಕೆ ಸಂದಾಯವಾಗುತ್ತಿದ್ದ ಕಪ್ಪಕಾಣಿಕೆಗಳು ತನಗೆ ಸಲ್ಲುವಂತೆ ವ್ಯವಸ್ಥೆ ಮಾಡಿದಂತೆ ತಿಳಿದುಬರುತ್ತದೆ. ಇವನು ಕೃಷ್ಣಾಪುರ ಎಂಬಲ್ಲಿ ತಿರುವೇಂಗಡನಾಥ ಸ್ವಾಮಿಯ ದೇವಾಲಯವನ್ನು ಕಟ್ಟಿಸಿ ಅದರ ಮೇಲ್ಮೆಗಾಗಿ ಅನೇಕ ಗ್ರಾಮಗಳ ಹುಟ್ಟುವಳಿಯನ್ನು ದತ್ತಿಕೊಟ್ಟ. ತನ್ನ ಪ್ರಾಂತ್ಯದಲ್ಲಿ ಸುಭದ್ರವಾದ ಆಡಳಿತವನ್ನು ಸ್ಥಾಪಿಸಿದ. ಇವನಿಗೆ ಪಾಂಡ್ಯಕುಲಸ್ಥಾಪನಾಚಾರ್ಯ ಹಾಗೂ ದಕ್ಷಿಣ ಸಮುದ್ರ ಸಾರ್ವಭೌಮ ಎಂಬ ಬಿರುದುಗಳಿದ್ದವು.

	ಕೃಷ್ಣಪ್ಪನಾಯಕ (ಮಧುರೆ) 2: ಮಧುರೆಯ ನಾಯಕ ಮನೆತನದ ನಾಲ್ಕನೆಯ ಅಧಿಕಾರಿ; ವೀರಪ್ಪನಾಯಕನ ಹಿರಿಯ ಪುತ್ರ. ಇವನಿಗೆ ವೀರಕೃಷ್ಣ ಎಂಬ ಹೆಸರೂ ಇತ್ತು. ಇವನ ಆಳ್ವಿಕೆಯ ಕಾಲ 1595-1601. ಇವನನ್ನು ಒಂದು ಶಾಸನದಲ್ಲಿ ಪಾಂಡ್ಯಪಾರ್ಥಿವ ಕೃಷ್ಣನೃಪತಿ ಎಂದು ಕರೆಯಲಾಗಿದೆ. ಈತ ಅರವೀಡು ಮನೆತನದ ಒಂದನೆಯ ವೆಂಕಟನನ್ನು ತನ್ನ ಸಾರ್ವಭೌಮನೆಂದು ಒಪ್ಪಿಕೊಂಡಿದ್ದ.

ಕೃಷ್ಣಪ್ಪನಾಯಕ (ಜಿಂಜಿ): ಜಿಂಜಿಯ ಪಾಳೆಯಪಟ್ಟಿನ ನಾಯಕ. ಇವನ ಕಾಲ ಸು.1616. ಇವನು ಪೆನುಕೊಂಡೆಯ ಶ್ರೀರಂಗನ ವಿರುದ್ಧ ನಡೆದ ಪಿತೂರಿಯಲ್ಲಿ ಪಿತೂರಿಕೋರ ಜಗರಾಯನ ಸಹಾಯಕನಾಗಿ ಭಾಗವಹಿಸಿದ್ದರಿಂದ ರಾಜ್ಯದ ಬಹುಭಾಗವನ್ನು ಕಳೆದುಕೊಂಡದ್ದಲ್ಲದೆ ಸಾಮ್ರಾಜ್ಯದ ಬಂದಿಯಾಗಿದ್ದನೆಂದೂ ಅನಂತರ ಬಿಡುಗಡೆ ಹೊಂದಿದನೆಂದೂ ತಿಳಿದುಬರುತ್ತದೆ.

	ಕೃಷ್ಣಪ್ಪನಾಯಕ (ಮಂಜರಾಬಾದ್): 1800ರಲ್ಲಿ ಈತ ಬ್ರಿಟಿಷರ ವಿರುದ್ಧ ದಂಗೆಯನ್ನು ಎಬ್ಬಿಸಿದನೆಂದೂ ಮೈಸೂರು ಮತ್ತು ಬ್ರಿಟಿಷ್ ಸೈನ್ಯಗಳು ಇದನ್ನಡಗಿಸಿದುವೆಂದೂ ತಿಳಿದುಬರುತ್ತದೆ.     				
	(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ